ಬನ್ನೂರು
	ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿ ಮೈಸೂರಿಗೆ ಪೂರ್ವದಲ್ಲಿ 23 ಕಿಮೀ ದೂರದಲ್ಲಿ ಕಾವೇರಿಯ ಎಡದಂಡೆಯಲ್ಲಿರುವ ಪಟ್ಟಣ. ಜನಸಂಖ್ಯೆ 15.108. (1981). ಇದು 8ನೆಯ ಶತಮಾನದ ಮಧ್ಯದಲ್ಲಿ ಗಂಗ ಅರಸ ಶ್ರೀಪುರುಷನ ರಾಜಧಾನಿಯಾಗಿದ್ದ ವಿಷಯ ಶಾಸನಗಳಿಂದ ತಿಳಿದುಬರುತ್ತದೆ. ಶಾಸನಗಳಲ್ಲಿ ಇದನ್ನು ವಹ್ನಿಪುರ, ವರ್ಣಿಯೂರು ಎಂದು ಕರೆಯಲಾಗಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿ ಬನ್ನಿಯೂರು ಎಂಬ ಪ್ರಯೋಗವೂ ತಮಿಳು ಶಾಸನಗಳಲ್ಲಿ ವನ್ನಿಯೂರು ಎಂಬ ಪ್ರಯೋಗವೂ ಕಂಡು ಬರುತ್ತದೆ. ಇದಕ್ಕೆ ಜಿನನಾಥಚತುರ್ವೇದಿ ಮಂಗಲ ಎಂಬ ಹೆಸರು ಇತ್ತು.

	ಇಲ್ಲಿ ಕೋಸಲೇಶ್ವರ, ಹನುಮಂತೇಶ್ವರ, ಜನ್ಮಾಂಜನೇಯ ಮತ್ತು ಸರೋವರಾಂಜನೇಯ ಎಂಬ ನಾಲ್ಕು ದೇವಾಯಗಳಿವೆ. ಈಗ ಪಾಳು ಬಿದ್ದಿರುವ ಕೋಸಲೇಶ್ವರ ದೇವಾಲಯದ ದಕ್ಷಿಣಗೋಡೆಯ ಮೇಲೆ ತಮಿಳುಶಾಸನವಿದೆ. ಹನುಮಂತೇಶ್ವರ ದೇವಾಲಯ ಅತ್ಯಂತ ಪ್ರಾಚೀನವಾದ್ದು. ಇದರ ತಳಪಾದಿಯ ಕಲ್ಲಿನ ಮೇಲೆ ಚೋಳ ರಾಜರಾಜನ (985-1016) ಒಂದು ತಮಿಳು ಶಾಸನವಿದೆ. ಈ ದೇವಾಲಯದಲ್ಲಿರುವ ಲಿಂಗವನ್ನು ಹನುಮಂತ ಪ್ರತಿಷ್ಠೆ ಮಾಡಿದನೆಂದು ಐತಿಹ್ಯ. ಜನ್ಮಾಂಜನೆಯ ದೇವಾಲಯದ ಆಂಜನೇಯನ ವಿಗ್ರಹವನ್ನು ಮಾಧ್ವ ಗುರು ವ್ಯಾಸರಾಯಸ್ವಾಮಿ ಪ್ರತಿಷ್ಠಿಸಿದರೆಂಬ ಹೇಳಿಕೆ ಇದೆ. ಈಗ ದೇವಾಲಯವಿರುವೆಡೆಯಲ್ಲಿಯೇ ಅವರು ಜನಿಸಿದರೆಂದು ಹೇಳುವುದುಂಟು. ಸರೋವರದ ಬಳಿ ಆಂಜನೇಯ ದೇವಾಲಯವಿರುವುದರಿಂದ ಸರೋವರಾಂಜನೆಯವೆಂಬ ಹೆಸರು ಬಂದಿದೆ. ರಾಮದೇವರ ದೇವಾಲಯ ಇಲ್ಲಿರುವ ಉಳಿದೆಲ್ಲ ದೇವಾಲಯಗಳಿಗಿಂತಲೂ ದೊಡ್ಡದು.

	ಈ ಊರಿನಲ್ಲಿ ನಡೆಯುವ ಹೇಮಾದ್ರಮ್ಮನ ಜಾತ್ರೆ ಪ್ರಸಿದ್ಧವಾದುದು. ಈ ದೇವತೆಯ ಸುಂದರ ಸ್ವರ್ಣ ವಿಗ್ರಹ ನಾಲ್ಕು ಕೈಗಳುಳ್ಳದಾಗಿದ್ದು ಸುಮಾರು 38 ಸೆಂಮೀ ಎತ್ತರವಿದೆ. ಎರಡು ಕೈಗಳಲ್ಲಿ ಶಂಖ, ಚಕ್ರಗಳಿದ್ದು ಉಳಿದೆರಡು ಕೈಗಳಲ್ಲಿ ಒಂದು ವರದಹಸ್ತ ಮತ್ತೊಂದು ಅಭಯಹಸ್ತವಾಗಿದೆ. ಮೂಲವಿಗ್ರಹವನ್ನು ವಿದ್ಯಾರಣ್ಯರು ಪೂಜಿಸುತ್ತಿದ್ದು ಸಂನ್ಯಾಸಾಶ್ರಮ ಸ್ವೀಕರಿಸಿದ ಅನಂತರ ಅದನ್ನು ವಿಜಯನಗರ ರಾಜರಿಗೆ ಕೊಟ್ಟರೆಂದೂ ಆ ವಿಗ್ರಹ ಕೆಲವು ಶತಮಾನಗಳ ಹಿಂದೆ ಕಳುವಾಗಲಾಗಿ ಅದರ ಬದಲು ಈಗಿನ ವಿಗ್ರಹವನ್ನು ತಯಾರಿಸಲಾಯಿತೆಂದೂ ಹೇಳುವರು. ಜಾತ್ರೆ ಮಾಘಮಾಸದ ಶುಕ್ಲ ಪಕ್ಷದ 13ನೆಯ ದಿನ ಪ್ರಾರಂಭವಾಗಿ 5 ದಿನ ಪರ್ಯಂತ ಜರಗುತ್ತದೆ. ಸಾಮಾನ್ಯವಾಗಿ ದೇವತೆ ಬ್ರಾಹ್ಮಣರಿಂದ ಪೂಜಿಸಲಾಗುತ್ತಿದ್ದು ಚತುರ್ದಶಿ ದಿನ ಮಾತ್ರ ಹರಿಜನರು ಆಹ್ವಾನಿತರಾಗಿ ಬಂದು ಹುಣ್ಣಿಮೆಯಂದು ದೇವತೆಯನ್ನು ಮೆರವಣಿಗೆಯಲ್ಲಿ ಅವರ ಕೇರಿಗೆ ಕರೆದೊಯ್ದು ಅವರೇ ತಯಾರಿಸಿದ ಶುಚಿಯಾದ ಪದಾರ್ಥಗಳನ್ನು ನೈವೇದ್ಯವಾಗಿ ಸಮರ್ಪಿಸಲಾಗುವುದು. ಈ ಸಂಪ್ರದಾಯದ ಹಿನ್ನೆಲೆ ಹೀಗಿದೆ. ಬನ್ನೂರಿಗೆ 8 ಕಿಮೀ ದೂರದಲ್ಲಿ ಈ ದೇವತೆ ತನ್ನ ನಿವಾಸಸ್ಥಾನವಾಗಿ ಆಯ್ಕೆ ಮಾಡಲಾಗಿ ಊರಿನ ಜನಗಳು ಬನ್ನೂರಿಗೆ ಬರುವಂತೆ ಆಹ್ವಾನಿಸಿದರು. ಹೆಜ್ಜೆ ಹೆಜ್ಜೆಗೂ ಮಾನವ ತಲೆಯನ್ನು ಅರ್ಪಿಸುವುದಾದರೆ ಬರುವುದಾಗಿ ದೇವತೆ ಹೇಳಲು, ಈ ನಿಯಮವನ್ನು ಒಪ್ಪಲು ಜನಗಳು ಹಿಂಜರಿದರು. ಆದರೆ ಹರಿಜನರು ಸ್ವಲ್ಪವೂ ಹಿಂಜರಿಯದೆ ನಿಯಮವನ್ನು ಪಾಲಿಸಲು ಮುಂದೆ ಬಂದು ಮೊದಲನೆಯ ತಲೆಯನ್ನು ಕತ್ತರಿಸಿದ ಕೂಡಲೇ ದೇವತೆ ಸಂತುಷ್ಟಳಾಗಿ ಕರುಣೆ ಉಂಟಾಗಿ ಶಿರಗಳ ಬದಲಾಗಿ ತೆಂಗಿನಕಾಯಿಗಳನ್ನು ಅರ್ಪಿಸಲು ಹೇಳಲಾಯಿತು. ಈ ರೀತಿಯಾಗಿ ಆ ದೇವತೆಯನ್ನು ಬನ್ನೂರಿಗೆ ಕರೆತರಲಾಯಿತು. ಹರಿಜನರನ್ನು ಕುರಿತು ವರವನ್ನು ಕೇಳುವಂತೆ ಹೇಳಲು ವರ್ಷಕ್ಕೊಮ್ಮೆ ಅವರು ತಯಾರಿಸಿದ ಆಹಾರವನ್ನು ಸ್ವೀಕರಿಸುವಂತೆ ಪ್ರಾರ್ಥಿಸಿ ಒಪ್ಪಿಗೆ ಪಡೆದರು.

	ಬನ್ನೂರು ಕುರಿಸಾಕಣಿಗೆ ಹೆಚ್ಚು ಪ್ರಸಿದ್ಧ. ಬನ್ನೂರು ತಳಿ ಎಂಬ ವಿಶೇಷ ತಳಿಯ ಕುರಿಗಳಿಗೆ ಹೆಚ್ಚು ಬೇಡಿಕೆ ಇದೆ. ಈ ಊರಿನಲ್ಲಿ ಭಾನುವಾರ ಸಂತೆ ನಡೆಯುತ್ತದೆ. ಸುತ್ತಲೂ ಗದ್ದೆ ತೋಟಗಳಿಂದ ಸಮೃದ್ಧವಾಗಿರುವ ಈ ಊರಿನಲ್ಲಿ ವಿದ್ಯುತ್, ವೈದ್ಯಕೀಯ ಸೌಲಭ್ಯಗಳು ಇವೆ. ಈಚೆಗೆ ಈ ಊರಿನ ಬಳಿ ಕಾವೇರಿ ನದಿಗೆ ದೊಡ್ಡ ಸೇತುವೆಯನ್ನು ಕಟ್ಟಲಾಗಿದೆ. ಬನ್ನೂರು ಮೊದಲು ಹಳೆಯ ಅಷ್ಟಗ್ರಾಮ ತಾಲ್ಲೂಕಿಗೆ ಸೇರಿತ್ತು. 1882ರಲ್ಲಿ ಇದನ್ನು ತಿರುವಕೂಡ್ಲು ನರಸೀಪುರ ತಾಲ್ಲೂಕಿಗೆ ಸೇರಿಸಲಾಯಿತು. ಪೌರ ಸಭೆ ಇದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ